ಪ್ರಾಣಿಭಾಷೆ
ಹುಟ್ಟುಗುಣಗಳಿಗೆ ಸಂಬಂಧಿಸಿದಂತೆ ಪ್ರಾಣಿಗಳು ತಮ್ಮ ಹೃದಯದ ಉದ್ವೇಗಗಳನ್ನು ಅಭಿನಯ ಹಾಗೂ ಕೂಗುಗಳಿಂದ ವ್ಯಕ್ತಪಡಿಸುತ್ತವೆ. ಇದನ್ನೇ ಪ್ರಾಣಿಭಾಷೆ ಎನ್ನುವುದು. ಮಾನವನ ಭಾಷೆಗೂ ಇದೇ ಮೂಲವೆಂದು ತಜ್ಞರ ಅಭಿಪ್ರಾಯ. ಪ್ರಾಣಿಭಾಷೆ ಯಾವಾಗ ಹೇಗೆ ಹುಟ್ಟಿತು ಎಂಬ ಬಗ್ಗೆ ಊಹೆಗಳು ಇವೆಯಷ್ಟೆ. ಖಚಿತವಾಗಿ ಆ ಬಗ್ಗೆ ಏನೂ ಹೇಳಲುಬಾರದು. ಮೂಲಗಳನ್ನು ಕುರಿತಂತೆ ಎಲ್ಲ ಅನ್ವೇಷಣೆಗಳಲ್ಲೂ ಇದೇ ಸಮಸ್ಯೆ ಕಂಡುಬರುತ್ತದೆ. ಬಹುಶಃ ಪ್ರಣಯದ ಉದ್ವೇಗದಲ್ಲಿ ಒಂದು ಪ್ರಾಣಿ ಇನ್ನೊಂದು ಪ್ರಾಣಿಯನ್ನು ಕೂಗಿ ಕರೆದಾಗ ಪ್ರಾಣಿಭಾಷೆ ಹುಟ್ಟಿತೆಂದು ಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ. ಈ ದೃಷ್ಟಿಯಿಂದ ಕಾಡುಮೇಡುಗಳಲ್ಲಿ ವಾಸಿಸುವ ವಿವಿಧ ಬಗೆಯ ಪ್ರಾಣಿಗಳಲ್ಲಿ ಪಕ್ಷಿಗಳಲ್ಲಿ ಆಯಾ ಪ್ರಭೇದಕ್ಕೆ ವಿಶಿಷ್ಟವಾದ ಭಾಷೆಯನ್ನು ಕಾಣುತ್ತೇವೆ. ಅಪಾಯದ ಎಚ್ಚರಿಕೆ ಕೊಡುವ ಕೂಗುಗಳು, ತಾಯಿ ಮರಿಗಳನ್ನು ಗೂಡಿಗೆ ಕರೆವ ಕೂಗು. ಪ್ರಣಯದಲ್ಲಿ ಪ್ರಾಣಿಗಳು ಉದ್ಗರಿಸುವ ಹಲವು ಬಗೆಯ ಕೂಗುಗಳು, ಮರದಿಂದ ಮರಕ್ಕೆ ಸುದ್ದಿ ಮುಟ್ಟಿಸುವ ನೂರಾರು ಬಗೆಯ ಕೂಗುಗಳು ಇವನ್ನೆಲ್ಲ ಗಮನಿಸಿದಲ್ಲಿ ಪ್ರಾಣಿಭಾಷೆ ಮಾನವ ಭಾಷೆಯ ಮೂಲವಿರಬಹುದೆಂಬ ವಾದಕ್ಕೆ ಪುಷ್ಟಿ ದೊರೆತಂತಾಗುತ್ತದೆ. ಪ್ರಾಣಿಗಳ ಕೂಗನ್ನು ಫಕ್ಕನೆ ಕೇಳಿದವರಿಗೆ ಅದರ ಹಿಂದು ಮುಂದು ಗೊತ್ತಾಗದಿರಬಹುದು. ಆದರೆ ನುರಿತ ವಿದ್ವಾಂಸರು ಈ ಬಗ್ಗೆ ವಿಶೇಷ ಅಧ್ಯಯನ ನಡೆಸಿ ಆ ಕೂಗುಗಳಿಗೆ ಅರ್ಥ ಕಲ್ಪಿಸಿದ್ದಾರೆ. ಉದಾಹರಣೆಗೆ ಕಾಗೆಯನ್ನು ನೋಡಬಹುದು. ಅದು ವಿವಿಧ ಸನ್ನಿವೇಶಗಳಲ್ಲಿ ವಿವಿಧ ಉದ್ವೇಗಗಳನ್ನು ಅಭಿವ್ಯಕ್ತಿಸಲು ವಿವಿಧ ರೀತಿಯಲ್ಲಿ ಕೂಗುತ್ತದೆ. ಅಲ್ಲದೆ ಅದು ಪ್ರತಿಯೊಂದು ಉದ್ವೇಗಕ್ಕೂ ಅದಕ್ಕೆ ಉಚಿತವಾದ ಕೂಗನ್ನು ಅಳವಡಿಸಿಕೊಂಡಿದೆ ಎಂಬ ವಿಷಯ ಸ್ವಲ್ಪಕಾಲ ಕಾಗೆಗಳನ್ನು ವೀಕ್ಷಿಸಿದವರಿಗೆ ಗೋಚರಿಸುತ್ತದೆ. ಹ್ವಿಟ್‍ಮನ್ ಮತ್ತು ಕ್ರೇಗ್ ಎಂಬ ವಿದ್ವಾಂಸರು ಪಾರಿವಾಳಗಳಲ್ಲಿ ಕ್ರಿಯೆಗೂ ಕೂಗಿಗೂ ಇರುವ ವಿಚಿತ್ರ ಸಂಬಂಧಗಳನ್ನು ಗುರುತಿಸಿದ್ದಾರೆ. ಡೂಪಾಂಟ್ ಎಂಬಾತ ಕೋಳಿಗಳು ಹಾಗೂ ಪಾರಿವಾಳಗಳಲ್ಲಿ ಭಿನ್ನ ಅರ್ಥವುಳ್ಳ 12 ಕೂಗುಗಳನ್ನೂ ನಾಯಿಗಳಲ್ಲಿ 18ನ್ನೂ ಕೊಂಬಿರುವ ಪ್ರಾಣಿಗಳಲ್ಲಿ 22ನ್ನೂ ಗುರುತಿಸಿದ್ದಾನೆ. ಕಪಿಗಳು ತಮ್ಮ ಮಾತುಕತೆಗಳಲ್ಲಿ ಕಡೆಯ ಪಕ್ಷ 20 ವಿಭಿನ್ನ ಶಬ್ದಗಳನ್ನು ಮಾಡುತ್ತವೆಂದು ಗಾರ್ನೆಟ್ ಎಂಬ ವಿದ್ವಾಂಸನ ಅಭಿಪ್ರಾಯ.

	ಪ್ರಾಣಿ ಭಾಷೆಯಿಂದಲೆ ಆದಿ ಮಾನವನ ಕೇವಲ 300 ಪದಗಳ ಭಾಷೆ ಉಗಮಿಸಿತೆಂದು ಅನೇಕರ ಅಭಿಪ್ರಾಯ
(ಎಚ್.ಎಸ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ